ತಾಮ್ಸನ್, ಚಾಲ್ರ್ಸ್ ವೈವಿಲ್
1830-1882. ಸ್ಕಾಟ್ ಲೆಂಡಿನ ಒಬ್ಬ ಮೇಧಾವಿ ಪ್ರಾಣಿವಿಜ್ಞಾನಿ. ಈತನ ಮುಂಚಿನ ಹೆಸರು ವೈವಿಲ್ ಥಾಮಸ್ ಚಾಲ್ರ್ಸ್. 1876ರಲ್ಲಿ ನೈಟ್ ಪ್ರಶಸ್ತಿ ಬಂದಾಗ ಮೇಲಿನ ಹೆಸರಿಗೆ ಬದಲಾಯಿಸಿಕೊಂಡ. 1830 ರ ಮಾರ್ಚ್ 5ರಂದು ಪಶ್ಚಿಮ ಲೋತೀಯನ್ ಕೌಂಟಿಯ ಬಾನ್ಸೈಡ್ ಎಂಬ ಊರಿನಲ್ಲಿ ಜನಿಸಿದ. ಬಾಲ್ಯದಿಂದಲೂ ಈತನಿಗೆ ಪ್ರಕೃತಿ ವಿಜ್ಞಾನದಲ್ಲಿ ಒಲವು ಮೂಡಿತ್ತು. ಆದರೆ ಮನೆಯಲ್ಲಿ ಹಿರಿಯರಿಂದ ವೈದ್ಯಕೀಯ ಅಭ್ಯಾಸಕ್ಕೆ ಉತ್ತೇಜನ ದೊರೆತದ್ದರಿಂದ ವೈದ್ಯವಿಜ್ಞಾನದ ಅಭ್ಯಾಸವನ್ನೇ ಕೈಗೊಂಡ. ಆದರೂ ಪ್ರಕೃತಿ ವಿಜ್ಞಾನದ ವ್ಯಾಮೋಹವೇ ಪ್ರಬಲವಾದ್ದರಿಂದ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲಾಗಲಿಲ್ಲ. ಅಂತೆಯೇ ಪ್ರಕೃತಿ ವಿಜ್ಞಾನ ಅದರಲ್ಲೂ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡು ಪದವಿ ಪಡೆದ. ಅನಂತರ ವಿವಿಧ ವಿದ್ಯಾಸಂಸ್ಥೆಗಳಲ್ಲಿ ನಾನಾ ಹುದ್ದೆಗಳಲ್ಲಿದ್ದು 1870ರಲ್ಲಿ ಎಡಿನ್ ಬರೊ ವಿಶ್ವವಿದ್ಯಾಲಯದ ಪ್ರಕೃತಿ ವಿಜ್ಞಾನದ ಪ್ರಾಧ್ಯಾಪಕನಾಗಿ ನೇಮನಗೊಂಡ. ಈತನ ಸಂಶೋಧನೆಗಳ ಅತಿಮುಖ್ಯ ಅಂಶವೆಂದರೆ ಆಳಸಮುದ್ರದ ಜೀವರಾಶಿಗಳ ಅಧ್ಯಯನ. ಜೀವಿಗಳು ಸಮುದ್ರದ ಹೊರಮೇಲ್ಮೈ ಪದರಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಆಳಕ್ಕೆ ಹೋದಂತೆಲ್ಲ ಅತಿ ಕತ್ತಲು ಚಳಿ ಮತ್ತು ಅಧಿಕ ಒತ್ತಡದ ಪರಿಣಾಮವಾಗಿ ಸಮುದ್ರದ ಆಳದಲ್ಲಿ ಜೀವರಾಶಿಗಳು ಕಾಣಬರುವುದಿಲ್ಲ ಎಂಬ ನಂಬಿಕೆ ಪ್ರಚಲಿತವಾಗಿತ್ತು.

1860ರಲ್ಲಿ ಒಂದು ಕೇಬಲ್ ತಂತಿಯ ಸಹಾಯದಿಂದ ಮೆಡಿಟರೇನಿಯನ್ ಸಮುದ್ರದ ತಳದ ಮಣ್ಣನ್ನು ಎತ್ತಿದಾಗ ತಂತಿಗೆ ಕೆಲವು ಜೀವಿಗಳು ಅಂಟಿಕೊಂಡಿರುವುದು ಕಾಣಬಂತು. ಆದರೆ ಈ ಉಪಕರಣದಿಂದ ಕೇವಲ ಒಂದು ಮೈಲಿಯಷ್ಟು ಆಳವನ್ನು ಮಾತ್ರ ಎಟುಕಲು ಸಾಧ್ಯವಾಗಿತ್ತು. ತಾಮ್ಸನ್ ಇದೇ ದಿಸೆಯಲ್ಲಿ ಮಹತ್ತರವಾದ ಪ್ರಯೋಗಗಳನ್ನು ನಡೆಸಿ ಜೀವರಾಶಿಗಳ ವ್ಯಾಪ್ತಿಯ ಬಗೆಗಿನ ಜ್ಞಾನವನ್ನು ವಿಸ್ತಿರಿಸಿದ. ಸಮುದ್ರದ ಆಳವನ್ನು ಪತ್ತೆಹಚ್ಚುವ ಸಲುವಾಗಿ ಸಮುದ್ರಯಾನವನ್ನು ಈತ 1866 ಮತ್ತು 1869ರಲ್ಲಿ ಕೈಕೊಂಡ. ಇಂಥ ಯಾನಗಳಲ್ಲಿ ಚಾಲೆಂಜರ್ ಎಂಬ ಹಡಗಿನ ಯಾನ ಬಹು ಮುಖ್ಯವಾದುದು. ಇದು 1872ರಲ್ಲಿ ಪ್ರಾರಂಭವಾಗಿ 4 ವರ್ಷಗಳ ಕಾಲ ನಡೆಯಿತು. ಇದರಲ್ಲಿ ತಾಮ್ಸನ್‍ಗೆ ಆರು ಜನ ಪ್ರಕೃತಿತಜ್ಞರ ಮುಖಂಡನಾಗಿ ಯಾನ ಮಾಡಿ ಏಳು ಸಮುದ್ರಗಳನ್ನು ಕಾಣುವ ಅವಕಾಶ ದೊರೆಯಿತು. ಈ ಸಮುದ್ರಯಾನದಲ್ಲಿ ಸುಮಾರು 70,000 ಮೈಲುಗಳ ದೂರವನ್ನು ಕ್ರಮಿಸಿದ್ದೇ ಅಲ್ಲದೆ ಸುಮಾರು 372 ಸಲ ಹೂಳೆತ್ತುವ ಕಾರ್ಯಾಚರಣೆಯನ್ನು (ಡ್ರೆಡ್ಜಿಂಗ್) ನಡೆಸಲಾಯಿತು. ಆ ವೇಳೆ ತಾಮ್ಸನ್ ಮತ್ತು ಸಂಗಡಿಗರು ಹೆಚ್ಚು ಕಡಿಮೆ ಎಲ್ಲ ಪ್ರಮುಖ ಪ್ರಾಣಿಗುಂಪುಗಳಿಗೂ ಸೇರಿದ ಪ್ರತಿನಿಧಿಗಳನ್ನು ಸಂಗ್ರಹಿಸಿ ಅವುಗಳ ವ್ಯಾಪ್ತಿಯನ್ನು ಗುರುತಿದರು. ಈ ಕಾರ್ಯದಲ್ಲಿ ಪ್ರಾಣಿಗಳ ಜೀವನ ರೀತಿ ಮತ್ತು ಅವು ವಾಸಿಸುವ ಸಾಗರಗಳ ಆಳ ಮುಂತಾದ ವಿಷಯಗಳನ್ನು ಗುರುತಿಸಲಾಯಿತು. ವಿಕಾಸತಜ್ಞ ಚಾಲ್ರ್ಸ್ ಡಾರ್ವಿನ್ ಬೀಗಲ್ ಹಡಗಿನಲ್ಲಿ ಮಾಡಿದ ಯಾನವನ್ನು ತಾಮ್ಸನ್ನನ ಈ ಯಾತ್ರೆ ಹೋಲುತ್ತದೆ. ಈತನ ಈ ರೋಮಾಂಚಕಾರಿ ಯಾನದಿಂದ ದೊರೆತ ಅಪೂರ್ವ ಜೀವರಾಶಿಗಳು ಜೀವಿಗಳ ಪರಿಸರ ಪ್ರಜ್ಞೆ ಮತ್ತು ವ್ಯಾಪ್ತಿಯ ಮೇಲೆ ಇನ್ನೂ ಹೆಚ್ಚು ಪ್ರಯೋಗಗಳನ್ನು ನಡೆಸಲು ಅಸ್ತಿಭಾರ ಹಾಕಿಕೊಟ್ಟಿವೆ. ಇದರಿಂದ ಇನ್ನೂ ಅನೇಕ ಜೀವಿಗಳು ಬೆಳಕಿಗೆ ಬರುವ ಸಾಧ್ಯತೆಗಳಿಲ್ಲದಿಲ್ಲ. ಇಂಥ ಅನ್ವೇಷಣೆಗಳ ಹಾಗೂ ಸಂಶೋಧಕ ಪ್ರೌಢಿಮೆಯ ಕುರುಹಾಗಿ 1876ರಲ್ಲಿ ಈತನಿಗೆ ನೈಟ್ ಪದವಿ ಲಭಿಸಿತು. ಸಂಶೋಧನೆಗಳಲ್ಲಿ ನಿರತನಾಗಿರುವಾಗಲೇ 1882ರ ಮಾರ್ಚ್ 10ರಂದು ಇಹಲೋಕವನ್ನು ತ್ಯಜಿಸಿದ. ಈತನ ಸಂಶೋಧನೆಗಳು ಇಡೀ ಜೀವಪ್ರಪಂಚಕ್ಕೆ ಅತ್ಯುತ್ತಮ ಕೊಡುಗೆಗಳಾಗಿವೆ.
(ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ